Total Pageviews

Saturday, May 1, 2021

(Kannada) Srimad Indirakantha Thirtha Stotram by Kumta Narayana Acharya - Commentary by Shri Vishnu Shanbhag, Kumta

 ।।श्री हरिवायुगुरुभ्यो नमः।।

।। ಶ್ರೀ ಹರಿವಾಯುಗುರುಭ್ಯೋ ನಮಃ. ।।




||ಶ್ರೀ ಇನ್ದಿರಾಕಾನ್ತ ತೀರ್ಥಾಷ್ಟಕ||


ಶ್ರಯಾಮೋ ವಯಂ ಶ್ರೀನ್ದಿರಾಕಾನ್ತತೀರ್ಥಾನ್ ಸ್ಮಿತಜ್ಯೋತ್ಸ್ನಯೇನ್ದೂಕೃತಾ- ಸ್ಯಾಮ್ಬುಜಾತಾನ್| 

ಯತೀನ್ದ್ರಾನ್ ಮಹಾತೀರ್ಥಯಾತ್ರಾನ್ ಕೃತಾರ್ಥಾ ಯದ್ಯಙ್ಘ್ರ್ಯಬ್ಜ ಸಂದರ್ಶನಾಪ್ತ್ಯಾ ಸಮಸ್ತಾಃ ||೧||


ಯಾರ ಮುಖಕಮಲವು ಹುಣ್ಣಿಮೆಯ  ಬೆಳದಿಂಗಳನ್ನು ಚೆಲ್ಲುವ ಚಂದ್ರನಂತೆ ಸದಾ ಆಹ್ಲಾದಕರವಾಗಿರುತ್ತೋ,

ಯಾರು ಯತಿಧರ್ಮಪಾಲನೆಯಲ್ಲಿ ಮುಕುಟಪ್ರಾಯರಾಗಿ ತಮ್ಮಲ್ಲೇ ಸಕಲ ತೀರ್ಥಕ್ಷೇತ್ರಗಳ ಸನ್ನಿಧಾನವಿದ್ದರೂ ವ್ಯಾಪಕವಾಗಿ ತೀರ್ಥಾಟನೆ ಮಾಡಿದರೋ,

ಹಾಗಾಗಿ ಯಾರ ಪಾದಕಮಲಗಳ ದರ್ಶನ ಸೇವೆಗಳಿಂದ ಧರ್ಮ ಅರ್ಥ ಕಾಮ ಮೋಕ್ಷಾದಿ ಚತುರ್ವಿಧ ಪುಣ್ಯ ಪುರುಷಾರ್ಥಗಳು ಸಿದ್ಧಿಸುತ್ತವೆಯೋ

ಅಂತಹ ಶ್ರೀಮದ್ ಇನ್ದಿರಾಕಾನ್ತತೀರ್ಥ ಶ್ರೀಪಾದರ ಪೂಜ್ಯ ಚರಣಗಳನ್ನು ನಾವು ಆಶ್ರಯಿಸುತ್ತೇವೆ ||೧||



ನಮಾಮೋsಧುನಾ ಶ್ರೇಯಸೇ ಚಿತ್ಕಬನ್ಧಂ ಮುನೀನ್ದ್ರೇನ್ದಿರಾ-ಕಾನ್ತತೀರ್ಥಾಖ್ಯ ಸಿನ್ಧುಮ್ | ಸುಶಾನ್ತಾದಿರತ್ನಂ ಸಸದ್ವಾಕ್ತರಙ್ಗಂ ಸದ್ಯೋದ್ಯನ್ಮುಖೇನ್ದುಂ ಸುವಿದ್ಯಾಪಗಾಙ್ಗಮ್ ||೨||


(ಸ್ತೋತ್ರಕಾರರು ಈ ಎರಡನೇ  ನುಡಿಯಲ್ಲಿ ಶ್ರೀಗಳವರನ್ನು ಮಹಾನ್ ಸಾಗರಕ್ಕೆ ಹೋಲಿಸಿ ವರ್ಣಿಸುತ್ತಾರೆ)


ಶ್ರೀಮದ್ ಇನ್ದಿರಾಕಾನ್ತ ತೀರ್ಥ ಶ್ರೀಪಾದರೆಂದರೆ ಒಂದು ಮಹಾನ್ ಸಾಗರವಿದ್ದಂತೆ.


ಈ ಸಾಗರದ ಜಲವು ಜಡವಾದ ನೀರಲ್ಲ ಅದು ಪೂರ್ಣಜ್ಞಾನರೂಪ.  ಶಮ, ದಮ, ಉಪರತಿ, ತಿತಿಕ್ಷುಗಳಂತಹ ಅಗಣಿತಗುಣ ಸಮೂಹಗಳೇ ಅಂತಹ ಸಾಗರದಲ್ಲಿರುವ ರತ್ನಗಳ ರಾಶಿಗಳು


ಶ್ರೀಗಳವರಲ್ಲಿ ನಿತ್ಯ ಸಿದ್ಧವಾದ ನಿಗ್ರಹ ಮತ್ತು ಅನುಗ್ರಹಗಳೇ ಈ ಸಾಗರದ ಭೋರ್ಗರೆಯುವ ಅಲೆಗಳು.


ಇಂತಹ ಸಾಗರದ ಮೇಲೆ ಸರ್ವದಾ ಉದಯವಾದ ಪ್ರಸನ್ನ ಮುಖವೆಂಬ ಚಂದ್ರಮನ ಕಾಂತಿ ಎಲ್ಲ ಕಾಲದಲ್ಲೂ ಹರಡಿಯೇ ಇದೆ.


ವೇದ ವೇದಾಂಗ ಮತ್ತು ಇತರ ಸರ್ವ ಶಾಸ್ತ್ರಗಳೆಲ್ಲ ಈ ಸಾಗರಕ್ಕೆ ಬಂದು ಸೇರುವ ನದಿಗಳು.


ನಮ್ಮೆಲ್ಲರ ಕಲ್ಯಾಣಸಾಧನೆಗಾಗಿ ಇಂತಹ ಈ ಮಹಾಸಾಗರಕ್ಕೆ ನಮಸ್ಕರಿಸುತ್ತೇವೆ. ||೨||



ಭಜಾಮೋ ಭವವ್ಯಾಧಿಭಙ್ಗಾಯ ಭಾನುಂ ವಿರಕ್ತೇನ್ದಿರಾಕಾನ್ತ- ತೀರ್ಥಾಭಿಧಾನಮ್ | ಧರಾಚಾರಿಣಂ ಹೃತ್ತಮೋನಾಶಶೀಲಂ ಶ್ರಿತಸ್ವಾಂತ- ನೇತ್ರಾಬ್ಜ-ಸನ್ತೋಷಮೂಲಮ್||೩||


ನೋಡುವವರ ಕಣ್ಣುಗಳಿಗೆ ಆನಂದವನ್ನುಂಟು ಮಾಡುತ್ತ ,


ಸೇವಿಸುವವರ ಹೃದ್ಗುಹೆಯಲ್ಲಿ ದಟ್ಟವಾಗಿ ತುಂಬಿದ ಅಜ್ಞಾನಾಂಧಕಾರವನ್ನು ನಾಶಪಡಿಸುತ್ತ ,


ಧರೆಯೊಳು ಜ್ಞಾನಪ್ರಕಾಶವನ್ನು ಬೀರುತ್ತ ತಿರುಗುವ ಶ್ರೀಮದ್ ಇನ್ದಿರಾಕಾನ್ತ ತೀರ್ಥರೆಂಬ ಸೂರ್ಯನನ್ನು ನಾವು ಭಜಿಸುತ್ತೇವೆ.



ಪಿಬಾಮಾತ್ರ ವಾಕ್ಕೌಮುದೀಂ ತಾಮಮನ್ದಾಂ ಸಮೇತ್ಯೇನ್ದಿರಾಕಾನ್ತ ತೀರ್ಥಾಖಿಲೇಂದುಮ್ | ದ್ವಿಜನ್ಮಾನ್ತರಾಣ್ಯಾ- ಶ್ರಿತಾನನ್ತಮೇನಂ ಯಯಾ ಸ್ಯಾನ್ಮನಸ್ತಾಪಹಾನಿಃ ಸಮಾನಮ್ ||೪||


ನಮ್ಮ ಜನ್ಮಜನ್ಮಾಂತರದ ಪುಣ್ಯದಿಂದ ಬ್ರಾಹ್ಮಣರಾಗಿ ಹುಟ್ಟಿದ್ದೇವೆ. (ಆಗ ನಮ್ಮ ವಿಶೇಷ ಕರ್ತವ್ಯವೇನು? ಎಂದರೆ ಹೇಳುತ್ತಾರೆ.)


ನಾವೆಲ್ಲ ಚಕೋರ ಪಕ್ಷಿಗಳು. 

ಗಗನದಲ್ಲಿ ಶ್ರೀಮದ್ ಇನ್ದಿರಾಕಾನ್ತ ತೀರ್ಥರೆಂಬ ಚಂದ್ರಮನು ಉದಯಿಸಿದ್ದಾನೆ.


ಶ್ರೀಗಳವರ ಸಜ್ಞಾನಪ್ರದ ವಾಗ್ವಿಲಾಸವೆಂಬ ಬೆಳದಿಂಗಳನ್ನು ಸಂತತ ಕುಡಿಯುತ್ತಿರೋಣ. 


ಅದರಿಂದ ನಮ್ಮ ದೇಹಕ್ಕೂ ಮನಸ್ಸಿಗೂ (ಈ ಜನನ ಮರಣರೂಪೀ) ತಾಪವು ಶೀಘ್ರವೇ ಪರಿಹಾರವಾಗುವದು.

 

(ಚಕೋರ ಪಕ್ಷಿಯು ಚಂದ್ರನ ಬೆಳದಿಂಗಳನ್ನು ಮಾತ್ರ ಕುಡಿದು ಜೀವಿಸುತ್ತದೆ ಎಂದು ಆಖ್ಯಾಯಿಕೆ ಇದೆ.)



ಶುಭಾಯೇನ್ದಿರಾಕಾನ್ತತೀರ್ಥಾಖ್ಯ ಮೇಘಃ 

ಸುಶಾಸ್ತ್ರಾಮ್ಬುಧೇರ್ಲಬ್ಧ- ಸಂವಿಜ್ಜಲೌಘಃ | 

ಹರಿಪ್ರೇರಿತೋ ಧೀರನಾದೋsಸ್ತು ನೋsದ್ಯ 

ಸ್ಮಿತೇರಂಮದೋ ಭಕ್ತಕೇಕ್ಯೋಘಹೃದ್ಯಃ ||೫||



ಸಚ್ಚಾಸ್ತ್ರವೆಂಬ ಸಮುದ್ರದಿಂದ ಹೊರಟ ಜ್ಞಾನರೂಪವೆಂಬ ಸಂವಿಜ್ಜಲದಿಂದ ತುಂಬಿದ. (ಸಂವಿಜ್ಜಲ ಎಂದರೆ ಆ ಜಲ ಜಡವಲ್ಲ.)


ಆ ಮೇಘವು ಶ್ರೀಹರಿ ಮತ್ತು ಪ್ರಾಣರೂಪಿ ವಾಯುವಿನಿಂದ ಚಲಿಸುತ್ತಿದೆ. 


ಧೀರ ಗಂಭೀರವಾದ (ಶ್ರೀಮನ್ನಾರಾಯಣನ ಗುಣೋತ್ಕರ್ಷವನ್ನು ಸದಾ ಬಿತ್ತರಿಸುವ) ವಾಣಿಯೆಂಬ ಮೇಘನಾದ ಹೊಂದಿದ. 


ಶ್ರೀಗಳವರ ಮುಖದಲ್ಲಿರುವ ಮಂದಹಾಸವೇ ಆ ಮೋಡದ ಮಿಂಚು 


ಆ ಮೇಘಧ್ವನಿಗೆ ಹರ್ಷಿತರಾಗಿ ಎದ್ದು ಕುಣಿಯುವ ಭಕ್ತವೃಂದವೇ 

ನವಿಲುಗಳ ಗುಂಪಾಗಿದೆ. (ಮಳೆಯ ಸೂಚನೆ ಸಿಕ್ಕ ಕೂಡಲೇ ತಮ್ಮ ಗರಿಗೆದರಿ ನವಿಲುಗಳು ನರ್ತಿಸುತ್ತವೆ, ಅಲ್ಲವೇ!)


ಅಂತಹ ಆ ಶ್ರೀಮದ್ ಇನ್ದಿರಾಕಾನ್ತ ತೀರ್ಥರೆಂಬ ಮೇಘವು ಸದಾ ನಮ್ಮನ್ನು ಪೋಷಿಸುತ್ತ ಕಲ್ಯಾಣವನ್ನು ಮಾಡಲಿ. ||೫||



ಕರೋತ್ವಿನ್ದಿರಾಕಾನ್ತ - ತೀರ್ಥಾಭಿಧಾನಂ ಸರೋಜ್ಞಾನವಾರ್ಯ - ಶ್ರಮಾನ್ನೋsಕ್ಷಿಮೀನಮ್ | ಅರಾಗೋರುನಕ್ರ ಮಹಾಕ್ಷೇತ್ರಯಾನಂ ಕರಾಸ್ಯಾಙ್ಘ್ರಿಪದ್ಮಮ್ ದ್ವಿಜೈಃ ಸೇವ್ಯಮಾನಮ್ ||೬||


ಸಚ್ಚಾಸ್ತ್ರಜ್ಞಾನರೂಪಿ ಜಲದಿಂದ ಪೂರ್ಣವಾದ 


ಸುಂದರವಾದ ನಯನಗಳ ಕೃಪಾದೃಷ್ಟಿಯೆಂಬ ಮೀನುಗಳಿಂದ ತುಂಬಿದ 


ಐಹಿಕ ವಿಷಯಗಳೆಂಬ ಘೋರವಾದ ಮೊಸಳೆಗಳೇ ಇಲ್ಲದಿರುವದರಿಂದ ಯಾರಿಗೂ ಭಯವನ್ನು ಉಂಟು ಮಾಡದ 


ತೀರ್ಥಕ್ಷೇತ್ರಗಳೆಂಬ ಹೊಲಗಳಿಗೆ ನೀರುಣಿಸಿ ಸಮೃದ್ಧವನ್ನಾಗಿ ಮಾಡುವ 


ಯಾರ ಮುಖ, ಕೈ, ಕಾಲುಗಳೆಂಬ  ಸುಂದರವಾದ ಕಮಲಗಳಿಂದ ಶೋಭಾಯಮಾನವಾಗಿದೆಯೋ


ಬ್ರಾಹ್ಮಣರೂಪಿ ಹಂಸಪಕ್ಷಿಗಳು ಎಲ್ಲಿ ಆಶ್ರಯಪಡೆದು ಸೇವೆಯನ್ನು ಮಾಡುತ್ತಿರುತ್ತಾರೋ 


ಅಂತಹ ಆ ಶ್ರೀಮದ್ ಇನ್ದಿರಾಕಾನ್ತ ತೀರ್ಥರೆಂಬ ದಿವ್ಯ ಸರೋವರವು ನಮ್ಮ ಜನ್ಮಜನ್ಮಾಂತರಗಳ ಶ್ರಮವನ್ನು ನಾಶಮಾಡಲಿ ||೬||



ಅಲೋಲೇನ್ದಿರಾಕಾನ್ತ ತೀರ್ಥೇನ್ದ್ರಶಾಲಃ ಸುಭಕ್ತ್ಯಾಲವಾಲೋ ವಿರಕ್ತ್ಯಾದ್ಯಮೂಲಃ | ಕ್ಷಮಾತ್ವಕ್ ಶಿವಾಯೈಷ ಭೂಯಾತ್ಪ್ರಶಸ್ಯಃ ಪ್ರಮಾಸತ್ಸುಮೋ ನೋsಮೃತೋತ್ಕೃಷ್ಟ ಸಸ್ಯಃ ||೭||


(ಶ್ರೀಮದ್ ಇನ್ದಿರಾಕಾನ್ತತೀರ್ಥ ಶ್ರೀಪಾದರನ್ನು ಕಲ್ಪವೃಕ್ಷವೆಂದು ಇಲ್ಲಿ ವರ್ಣಿಸುತ್ತಾರೆ)


ಶ್ರೀಹರಿಗುರುಗಳವಲ್ಲಿ ಶ್ರೀಗಳಿಗೆ ಇರುವ ಅಖಂಡ ಭಕ್ತಿಯೇ ಈ ವೃಕ್ಷಕ್ಕೆ ಇರುವ ಭೂಮೂಲ. (ಗಿಡವನ್ನು ನೆಡುವಾಗ ಮಣ್ಣು ಗೊಬ್ಬರ ಹಾಕಿ ಹಸನಾಗಿ ಮಾಡುತ್ತೇವೆ. ಆ ಭೂಮೂಲ) 


ಶ್ರೀಹರಿಯನ್ನು ಬಿಟ್ಟು ಉಳಿದ ವಿಷಯಗಳಲ್ಲಿ ಇರುವ ವಿರಕ್ತಿಯೇ ಬೇರು. 


ಕ್ಷಮೆಯೇ ಆ ಮರದ ತೊಗಟೆ ಅಥವಾ ಕಾಂಡ 


ಜ್ಞಾನವೇ ಪ್ರಶಸ್ತವಾದ ಸುಂದರ ಸುಗಂಧ ಪುಷ್ಪಗಳು 


ಸುಧೃಢವಾದ ಇನ್ದಿರಾಕಾನ್ತ ತೀರ್ಥರೆಂಬ ಈ ಕಲ್ಪವೃಕ್ಷಕ್ಕೆ ಮೋಕ್ಷವೆಂಬ ಸ್ವಾದಿಷ್ಟ ಫಲವು ಶ್ರೀಗಳವರನ್ನು ಸೇವಿಸುವವರಿಗೆ  ಸಿದ್ಧವಾಗಿದೆ .



ಮಠೇಶೇನ್ದಿರಾಕಾನ್ತ ತೀರ್ಥಾಃ ! ಪರೇsಪಿ ಸ್ಥಿತಾನ್ನ್ಯಸ್ಯ ಮಾಠೇಶ್ಯಮದ್ಧಾವರೇsಪಿ | ಶ್ರಿತಾನಿ ಪ್ರಧಾನಾನಿ ವಶ್ಚಿದ್ವಿರಕ್ತೀ ಕ್ಷಮಾ ಶಾನ್ತಿದಾನ್ತೀ ದಯಾದಿಷ್ಟ ಭಕ್ತೀ ||೮||


ಅಹೋ! ಶ್ರೀಮಠದ ಪೀಠವನ್ನು ಅಲಂಕರಿಸಿದ ಶ್ರೀ ಇಂದಿರಾಕಾಂತ ತೀರ್ಥ ಮಹಾಸ್ವಾಮಿಗಳವರೇ!! 


ನೀವು ಶಿಷ್ಯ ಸ್ವಾಮಿಗಳವರಲ್ಲಿ ಮಠಾಧಿಕಾರವನ್ನು ನೀಡಿದ್ದರೂ 


ಜ್ಞಾನ, ಶಾಂತಿ, ಇಂದ್ರಿಯನಿಗ್ರಹ, ಸಂತುಷ್ಟಿ, ವೈರಾಗ್ಯ, ಕ್ಷಮೆ, ದಯೆ ಮತ್ತು ಶ್ರೀಹರಿಗುರುಗಳವರಲ್ಲಿ ಆಚಲಭಕ್ತಿ ಎಂಬ ಈ ಎಂಟು ಶಕ್ತಿಗಳೇ ತಮ್ಮ ಅಷ್ಟ ಪ್ರಧಾನಿಗಳಾಗಿದ್ದರೂ,  ಇವು ಕೂಡ ತಮ್ಮಲ್ಲೇ ಆಶ್ರಯವನ್ನು ಪಡೆದಿವೆ.


ಶ್ರೀನ್ದಿರಾಕಾನ್ತತೀರ್ಥಾನಾಮಿದ-ಮಷ್ಟಕಮಿಷ್ಟದಮ್ | 

ತಚ್ಛಿಷ್ಯ ಕುಮಟಾ ನಾರಾಯಣಾಚಾರ್ಯೇಣ ನಿರ್ಮಿತಮ್ ||೯||


ಶ್ರೀಗಳವರ ಶಿಷ್ಯರಾದ ಕುಮಟಾ ನಾರಾಯಣಾಚಾರ್ಯರು   ಶ್ರೀಮದ್ ಇನ್ದಿರಾಕಾನ್ತತೀರ್ಥ ಪೂಜ್ಯಚರಣರ ಈ ಎಂಟು ನುಡಿಗಳ ಸ್ತೋತ್ರವನ್ನು ಸಕಲರಿಗೂ ಅವರವರ ಇಷ್ಟಸಿದ್ಧಿಗೋಸ್ಕರ ರಚಿಸಿದರು.


ಶ್ರೀ ಮಧ್ವೇಶಾರ್ಪಣಮಸ್ತು 


*******

ಶ್ರೀಗಳವರ ಅಸಾಧಾರಣ ವ್ಯಕ್ತಿತ್ವವನ್ನು ನಾನಾ ಉಪಮಾನಗಳಲ್ಲಿ ವರ್ಣಿಸಿ ಆ ದಿವ್ಯ ಮೂರ್ತಿ ಕಣ್ಣೆದುರು ಬಂದು ನಿಲ್ಲುವಂತೆ ಅದ್ಭುತವಾಗಿ ವರ್ಣಿಸಿದ ಶ್ರೀ ನಾರಾಯಣ ಪೈ ಅವರಿಗೂ ನಮ್ಮೆಲ್ಲರಿಂದ ಸಾಷ್ಟಾಂಗ ನಮಸ್ಕಾರಗಳು.


ಕುಮಟಾದಲ್ಲಿ ಪೈ ಎಂಬ ಗ್ರಹಸ್ಥ  ಕುಟುಂಬದಲ್ಲಿ ಜನಿಸಿ ಶ್ರೀಮದ್ ಇಂದಿರಾಕಾಂತ ತೀರ್ಥ ಶ್ರೀಗಳವರ ಪೂರ್ವಾಶ್ರಮದ ತಂದೆಯವರಾದ ಶ್ರೀ ನರಸಿಂಹ ಪುರಾಣಿಕರಲ್ಲಿ ವೇದ, ವೇದಾಂಗ, ವೇದಾಂತಾದಿಗಳನ್ನು ಕಲಿತು ತಮ್ಮ ಅಪ್ರತಿಮ ಪ್ರತಿಭೆಯಿಂದ ಆಚಾರ್ಯ ಎಂಬ ಬಿರುದನ್ನು ಶ್ರೀಗಳವರಿಂದ ಪಡೆದು ನಾರಾಯಣ ಪೈ ಅವರು ನಾರಾಯಣ ಆಚಾರ್ಯರೆಂದೇ ಮುಂದೆ ಪ್ರಸಿದ್ಧರಾಗಿ ಮಠದಲ್ಲಿದ್ದು ಜೀವನ ತುಂಬಾ ಸೇವೆಯನ್ನು ಮಾಡಿ ಧನ್ಯರಾಗಿದ್ದಾರೆ.  

ಇಂತಹ ಮಹಿಮಾನ್ವಿತರು ಬರೆದು ಇಟ್ಟ ಸಾಹಿತ್ಯದ ಮಾರ್ಗದರ್ಶನದ ಪಡೆದು ಆ ಮಹಾನ್ ಯತಿವರ್ಯರ ಗುಣಗಳನ್ನು ಕನ್ನಡೀಕರಿಸಲು ಸುಸಂಧಿಯನ್ನಿತ್ತ ನಿಮ್ಮೆಲ್ಲವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ

No comments:

Post a Comment

Kannada Bhajans commemorating Vahana Pooja to Lord Vedavyasa in Kashimath Banglore by Shri Girish Prabhu K

 Today we present bhajans written in Kannada by Shri Girish Prabhu K (Author of " A Genius named Sudhindra Tirtha") during the eve...